ಕರಂಡ ಹಣ್ಣಿನ ಗಿಡ : ಅಪೊಸೈನೇಸೀ ಕುಟುಂಬಕ್ಕೆ ಸೇರಿದ ಕ್ಯಾರಿಸ ಕರಂಡಸ್ ಎಂಬ ವೈಜ್ಞಾನಿಕ ಹೆಸರಿನ ದೊಡ್ಡ ಪೊದೆ ಅಥವಾ ಸಣ್ಣ ಮರ. ಕಬಳಿ ಗಿಡ, ಕಳಾಗಿಡ, ಹೆಜ್ಜಾರಿಗೆ-ಇವು ಇದರ ಪರ್ಯಾಯ ನಾಮಗಳು. ಉಷ್ಣ ಹಾಗೂ ಸಮಶೀತೋಷ್ಣವಲಯ ಗಳಲ್ಲೆಲ್ಲ ಹೇರಳವಾಗಿ ಕಾಣಬರುತ್ತದೆ. ಭಾರತದ ಮೂಲವಾಸಿ ಇದು ಎಂದು ಹೇಳಲಾಗಿದೆ. ಸಾಮಾನ್ಯವಾಗಿ ಮರಳು ಮಿಶ್ರಿತ ನೆಲದಲ್ಲಿ ನೀರಿನ ಸೌಲಭ್ಯ ಕಡಿಮೆ ಇರುವ ಪ್ರದೇಶಗಳಲ್ಲಿ ಬೆಳೆಯುತ್ತದೆ. ಹಣ್ಣಿಗಾಗಿ ಇದನ್ನು ಬೆಳೆಸುವುದು ಉಂಟು. ಇದರ ಕಾಯಿಯ ಬಣ್ಣದ ಆಧಾರದ ಮೇಲೆ ಇದನ್ನು ಕೆಂಪು ಮತ್ತು ಹಸಿರು ಎಂದು 2 ಬಗೆಗಳಾಗಿ ವಿಂಗಡಿಸ ಬಹುದು. ಕರಂಡಹಣ್ಣಿನ ಗಿಡ ಸು. 10'-20' ಎತ್ತರಕ್ಕೆ ಬೆಳೆಯುತ್ತದೆ. ಕಾಂಡದ ಮೇಲೆಲ್ಲ ಸರಳವಾದ ಅಥವಾ ಕವಲೊಡೆದ ದೃಢವಾದ ಮುಳ್ಳುಗಳಿವೆ. ಇದರ ಎಲೆಗಳು ಸರಳ ಮತ್ತು ಅಭಿಮುಖವಾಗಿ ಜೋಡಣೆಗೊಂಡಿವೆ. ಇವುಗಳ ಅಂಚು ನಯ, ತುದಿ ಮೊಂಡು. ಹೂಗಳು ಮಧ್ಯಾರಂಭಿ ಅಥವಾ ಸಂಕೀರ್ಣ ಪುಷ್ಪಗುಚ್ಚಗಳಲ್ಲೊ ಒಂಟಿಯಾಗಿಯೊ ಇರುತ್ತವೆ; ಇವು ದ್ವಿಲಿಂಗಿಗಳು. ಪುಷ್ಪಪತ್ರಗಳು 5, ಬಿಡಿಯಾಗಿವೆ; ಇವು ಹಣ್ಣಿನಲ್ಲೂ ಉಳಿದಿರುತ್ತವೆ. 

ಹೂದಳಗಳು 5, ಪರಸ್ಪರ ಕೂಡಿಕೊಂಡಿವೆ. ಇವುಗಳ ಬಣ್ಣ ಬಿಳಿ ಅಥವಾ ನಸುಗೆಂಪು. ಹೂದಳಗಳ ಕೂಡುವಿಕೆಯಿಂದಾದ ಕೊಳೆವೆಯ ಗಂಡಲಿನ ಬಳಿ ಅನುಬಂಧಿಕೆ (ಅಪೆಂಡೇಜ್) ಇದೆ. ಕೇಸರಗಳು 5, ಇವು ಹೂದಳಗಳಿಗೆ ಪರ್ಯಾಯವಾಗಿ ಜೋಡಣೆಗೊಂಡಿರುವುದಲ್ಲದೆ ಅವಕ್ಕೆ ಅಂಟಿಕೊಂಡಿವೆ. ಅಂಡಾಶಯ ಉಚ್ಚಸ್ಥಾನದ್ದು. ಇದರಲ್ಲಿ ಎರಡು ಕಾರ್ಪೆಲುಗಳೂ ಒಂದು ಇಲ್ಲವೆ ಎರಡು ಕೋಣೆಗಳೂ ಇವೆ. ಒಂದೊಂದು ಕೋಣೆಯಲ್ಲೂ ಹಲವಾರು ಅಂಡಕಗಳಿವೆ. ಫಲ ಅಂಡಾಕಾರದ ಬೆರಿ. ಫಲ ಬಿಡುವ ಕಾಲ ಆಗಸ್ಟ್‌-ಸೆಪ್ಟೆಂಬರ್ ತಿಂಗಳುಗಳು. ಅಪಕ್ವ ಕಾಯಿಗಳಲ್ಲಿ ಸಿ ಜೀವಾತು ಅಧಿಕ ಪ್ರಮಾಣದಲ್ಲಿದೆ. ಕಾಯಿಗಳು ಬಲು ಹುಳಿ. ಉಪ್ಪಿನಕಾಯಿಹಾಕಲು, ಚಟ್ನಿ ಮಾಡಲು ಇವನ್ನು ಬಳಸುತ್ತಾರೆ. ಹಣ್ಣು ಸಿಹಿಯಾಗಿದ್ದು ತಿನ್ನಲುಯೋಗ್ಯ. ಅಲ್ಲದೆ ಇದರಿಂದ ಜೆಲ್ಲಿ, ಪುಡಿಂಗ್ ಮುಂತಾದುವನ್ನು ಮಾಡಬಹುದು. ಹಣ್ಣನ್ನು ಚರ್ಮ ಹದ ಮಾಡಲೂ ಬಟ್ಟೆಗಳಿಗೆ ಬಣ್ಣ ಹಾಕುವಾಗಲೂ ಉಪಯೋಗಿಸುವುದುಂಟು. ಈ ಸಸ್ಯಕ್ಕೆ ಔಷಧೀಯ ಮಹತ್ತ್ವವೂ ಉಂಟು. ಬೇರನ್ನು ಜಂತು ಹುಳು ನಾಶಕವಾಗಿಯೂ ಎಲೆಗಳ ಕಷಾಯವನ್ನು ಕೆಲವು ಬಗೆಯ ಜ್ವರನಿವಾರಕವಾಗಿಯೂ ಬಳಸುತ್ತಾರೆ.              (ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ